Tuesday, February 8, 2011

ಗತ

ಎಂದೋ ಅರಳಿ ನಕ್ಕ ಹೂ
ಇಂದೇಕೆ ಜೀವ ಹಿಂಡುತಿದೆ
ಅಂದು ಅದರಂದವನು
ನೋಡಿಯೂ ನೋಡದ ಹಾಗೆ
ಸುಮ್ಮನಿದ್ದುಬಿಟ್ಟೆ
ಅದರ ಆದರ ಅಭಲಾಷೆಗಳನು
ತಿಳಿದೂ ತಿಳಿಯದ ಹಾಗೆ
ಸಾಗಿ ಬಂದುಬಿಟ್ಟೆ
ಆದರಿಂದು ಅಂದ, ಕಂಪು, ಆಹ್ವಾನದ ನಗುವು
ಎಲ್ಲವನೂ ಹೊತ್ತು ದಿಗ್ಗನೆದ್ದು ನಿಂತು ಬಿಟ್ಟಿದೆ
ಮನದ ಸ್ಮರತಿ ಪಟಲದಲಿ

ವರುಷಗಳೇ ಉರುಳಿದವು
ಹೂವಿನ ಪಕಳೆಗಳುದುರಿ
ಮಗಿ ಕಾಯಾಗಿ ಹಣ್ಣು ಬೀಜಗಳಾಗಿ
ಮತ್ತಷ್ಟು ವೃಕ್ಷಗಳೇ ಬೆಳೆದಿರಬೇಕು

ಸಮಯ ನಿಂತ ನೀರಲ್ಲವೆಂಬ ಮಾತು
ನೆನಪಾಗುವಷ್ಟರಲ್ಲಿ, ಬಯಸಿದ ನೀರು
ಹರಿದು ಮುಂದೆ ಹೋಗಿರುವುದು, ಇನ್ನಾರ ಪಾಲಿಗೋ
ಈಗಲಾದರೂ ಬಂದ ನೀರನ್ನೇ
ಬೊಗಸೆ ತುಂಬಿಕೊಂಡುಬಿಡಬೇಕೆಂದರೆ
ಕಡು ಬೇಸಿಗೆ,
ಹರಿವ ನೀರು ಪಾತಾಳ ಸೇರಿದೆ, ಕೈಗೆಟುಕದಂತೆ
ನಾನೂ ಕಾದು ಕುಳಿತಿದ್ದೇನೆ,
ಪ್ರವಾಹವನೇ ಉಕ್ಕಿ ಹರಿಸುವ ಒಂದು ಮಳೆಗೆ
ಸ್ವಾತಿಗಾಗಿ ಕಾಯ್ದ ಕಪ್ಪೆ ಚಿಪ್ಪಿನಂತೆ

No comments: