Monday, February 7, 2011

ಕವನದಂತಹ ಸಾಲುಗಳು

ಕೆಲ ಸಂದಿಗ್ಧಗಳು ಜೀವವನ್ನೇ ಹಿಂಡುತ್ತವೆ,
ಏನೊಂದೂ ಅರ್ಥವಾಗದೇ...
ಬದುಕು ಹೀಗೇ ಇರಬೇಕೆಂದು ಬಯಸಿದ
ಮನಸು ಘಾಸಿಯಾದ ಪ್ರತಿ ಕ್ಷಣಗಳೂ
ಬಹುಶಃ ಹೀಗೆಯೇ ಇರುತ್ತವೆಯೆನೋ

ಎದೆಯಲೊಸರುವ ಪ್ರತಿಯೊಂದು ನೋವಿಗೂ
ಪದಗಳು ಸಿಗುವುದು ಅಪರೂಪ
ಆದರೂ ಪ್ರತಿ ನೋವಿನ ಕ್ಷಣದಲೂ
ಏನಾದರೊಂದು ಬರೆಯಬೇಕೆನಿಸುತ್ತದೆ
ಏನೂ ಬರೆಯಲಾಗದೇ ಮನ ತಡವರಿಸುತ್ತದೆ
ತಡವರಿಸಿ ಬರೆದ ಮಾತುಗಳೆಲ್ಲ ಬಿಕ್ಕಲನ ಮಾತಿನಂತೆ
ತಾಳ್ಮೆಯಿದ್ದರೆ ತಿಳಿದಾವೂ...
ಇಲ್ಲವೆಂದರೆ ಪದಪುಂಜ ಪದಬಂಧದಂಂತೆ ಭಾಸವಾಗಿ
ಪುಸ್ತಕವಾದರೆ ಪುಟ ತಿರುವಿ, ಹಾಳೆಯಾದರೆ ಹರಿದೆಸೆದು
ಮುಂದೆ ನಡೆದಾರೂ...

ಹುಚ್ಚು ಕುತೂಹಲಕೊಂದು ಚಿಕ್ಕ ಪೂರ್ಣವಿರಾಮ ಇಡುವೆನೆಂದರೂ
ಮನಸು ಕೇಳುವುದುದೊಡ್ಡ ಪೂರ್ಣವಿರಾಮ ಎಂತಹುದು?
ಆದರ ಈದರಗಳನ್ನೆಲ್ಲ ಬದಿಗೆ ಸರಿಸಿದಾಗಲೂ
ನಾನು ಬರೆದುದು ಶ್ರೇಷ್ಠವೇ, ಏಕೆಂದರೆ
ನನ್ನ ಮನದ ಸಂದಿಗ್ಧಗಳಿಗೆಲ್ಲ ನಿರಾಳತೆಯ ಸಿಂಚನವನುಣಿಸಿದ ಸಾಲುಗಳವು

No comments: