Saturday, February 26, 2011

ಹೀಗೊಂದು ಮೇಲ್ಪಂಕ್ತಿಯ ನಡೆ


ಶಿವರಾಜಕುಮಾರ್(ಶಿವಣ್ಣ) ಹೊಸ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗದಂತಹ ಕ್ಷೇತ್ರಗಳಲ್ಲಿ 25 ವರ್ಷಗಳು, 50 ವರ್ಷಗಳ ಸುದೀರ್ಘ ಅವಧಿಯ ಸೇವೆಯನ್ನು ಸಲ್ಲಿಸಿದಾಗ ತಾವು ಸೇವೆ ಸಲ್ಲಿಸಿದ ಕ್ಷೇತ್ರದಿಂದ ಗೌರವ, ಸನ್ಮಾನಗಳನ್ನು ಬಯಸುತ್ತಾರೆ(ತಮ್ಮದು ಸೇವೆ ಎಂದು ಪರಿಗಣಿಸುವುದರಿಂದ). ಅದು ದೊರೆಯದಿದ್ದಾಗ ಮುನಿಸಿನ, ವಿಷಾದದ ಹೇಳಿಕೆಗಳೂ ವ್ಯಕ್ತವಾಗುತ್ತವೆ. ಆದರೆ ತಾವು ಒಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಆ ಕ್ಷೇತ್ರದಿಂದ ಒಂದು ಘನತೆ, ಅರ್ಥಿಕ ಭದ್ರತೆ, ಸಾಮಾಜಿಕ ಸ್ಥಾನಮಾನಗಳನ್ನು ಪಡೆದಿರುವುದನ್ನು ಮರೆತೇ ಬಿಡುತ್ತಾರೆ. ಆದರೆ ಶಿವರಾಜಕುಮಾರ್ ತಮ್ಮ 25 ವರ್ಷಗಳ ವೃತ್ತಿ ಬದುಕಿನ ನೆನಪಿಗಾಗಿ ಒಂದು ಸಮಾರಂಭವನ್ನೇ ಏರ್ಪಡಿಸಿದ್ದಾರೆ. ಹಾಗು ತಮ್ಮನ್ನು ಬೆಳೆಸಿದ ನಿರ್ಮಾಪಕರನ್ನು , ನಿರ್ದೇಶಕರನ್ನು ಸನ್ಮಾನಿಸಲು ನಿರ್ಧರಿಸಿದ್ದಾರೆ. ಮತ್ತು ಆ ಮೂಲಕ ತಮ್ಮನ್ನು ಸಾಕಿ ಬೆಳೆಸಿದ ಚಿತ್ರರಂಗವನ್ನೇ ಸನ್ಮಾನಿಸುತ್ತಿದ್ದಾರೆ. ನಾನು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದೆನೆಂದು ಯೋಚಿಸದೇ, ಚಿತ್ರರಂಗವೇ ತನಗೆ ಈ ಪರಿ ಬೆಳೆಯಲು ಅವಕಾಶ ನೀಡಿದೆಯೆಂಬ ಅವರ ಯೋಚನೆ ನಿಜವಾಗಿಯೂ ಅಭಿನಂದಿಸಬೇಕಾದ ಮತ್ತು ಅನುಸರಿಸಬೇಕಾದ ಮೇಲ್ಪಂಕ್ತಿಯ ಬೆಳವಣಿಗೆ. ಬರಿಯ ಚಿತ್ರಗಳಲ್ಲಿ ನಟಿಸುವುದರಿಂದ ತಾರೆಗಳಾಗುವುದಿಲ್ಲ, ಇಂಥ ಕಾರ್ಯಗಳಿಂದ ಜನಮನದಲ್ಲಿ ಬೇರೂರಿದಾಗಲೇ ನಟರು ತಾರೆಗಳಾಗುವುದು.

Friday, February 25, 2011

ಕೃಷಿಗೆ ವಿದೇಶಿ ಬಂಡವಾಳ ಬೇಕೆ?

ಕೃಷಿಗೆ ವಿದೇಶಿ ಬಂಡವಾಳ ಬೇಡ... ನಮ್ಮ ದೇದಲ್ಲಿ ಬಹಳಷ್ಟು ರೈತರಿಗೆ, ಮುಖ್ಯವಾಗಿ ಸಣ್ಣ ಹಿಡುವಳಿದಾರರಿಗೆ ಕೃಷಿ ವಾಣಿಜ್ಯಕ್ಕಿಂತಲೂ ಜೀವನೋಪಾಯದ ಮಾರ್ಗವಾಗಿರುತ್ತದೆ. ಬಹಳಷ್ಟು ರೈತರು ತಮ್ಮ ಅಹಾರ ಧಾನ್ಯಗಳಿಗೆ, ತರಕಾರಿಗಳಿಗೆ ತಮ್ಮ ತುಂಡು ಭೂಮಿಯನ್ನೇ ಅವಲಂಬಿಸಿರುತ್ತಾರೆ. ಈಗಾಗಲೇ ಕೃಷಿ ಆಧುನಿಕರಣ, ವಾಣಿಜ್ಯ ಬೆಳೆಗಳು, ರಸಗೊಬ್ಬರ, ಹೈಬ್ರೀಡ್ ಬೀಜ ಎಂದೆಲ್ಲ ರೈತರ ಭೂಮಿಯ ಸಾರವನ್ನು ನಾಶ ಮಾಡಿ, ಅವರ ಆಥರ್ಿಕ ಕ್ಷಮತೆಯನ್ನೂ ಹಾಳು ಮಾಡಿ ಅವನನ್ನು ಆತ್ಮಹತ್ಯೆಯ ದವಡೆಗೆ ತಂದು ನಿಲ್ಲಿಸಿದ್ದಾಗಿದೆ ( 1990ಕ್ಕೂ ಮುಂಚೆ ರೈತರು ಎಂಥ ಬರಗಾಲಕ್ಕೂ, ಬೆಳೆ ಹಾನಿಗೂ ಅತ್ಮಹತ್ಯೆ ಪರಿಹಾರ ಎಂದು ಎಣಿಸಿರಿಲಿಲ್ಲ).
ವಿದೇಶಿಯರು ಬಂಡವಾಳ ಹೂಡಿದಾಗ ಅವರಿಗೆ ಲಾಭವನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳೂ ಗೌಣವಾಗುತ್ತವೆ. ಭೂಮಿಯ ಭವಿಷ್ಯತ್ತಿನ ಸಾರದ ಬಗ್ಗೆ ಗಮನ ಹರಿಸಲಾರರು (ಈಗಾಲೇ ನಾವು ಎಂಡೋಸಲ್ಫಾನ್ನ್ನಂತಹ ವಿಷವನ್ನು ನಿಷೇಧಸಲೂ ಮೀನಮೇಷ ಎಣಿಸುತ್ತಿದ್ದೇವೆ, ಬೂಮಿಯನ್ನೇ ಹಾಳು ಮಾಡುವ ರಸಗೊಬ್ಬರಗಳನ್ನು ಬಳಸದೇ ಇಂದಿನ ಕೃಷಿ ಉತ್ಪಾದನೆಯ ಮಟ್ಟವನ್ನು ಕಾಯ್ದುಕೊಳ್ಳುವ ಮಾರ್ಗ ತಿಳಿಯದೇ ದಿಕ್ಕು ಕಾಣದಂತಾಗಿದ್ದೇವೆ). ರೈತರು ಪ್ರತಿ ಕೃಷಿ ಅವಶ್ಯಕತೆಗೂ ವಿದೇಶಿ ಬಂಡವಾಳವನ್ನೇ ಅವಲಂಬಿಸಬೇಕಾಗಬಹುದು ( ರೈತರಾಗಲೇ ತಮ್ಮ ಸಾಂಪ್ರದಾಯಿಕ ಬೀಜಗಳನ್ನು ನಾಶ ಮಾಡಿಕೊಂಡು ಎರಡನೆ ಬಾರಿಗೆ ಫಸಲೇ ನಿಡದ ಹೈಬ್ರೀಡ್ ಬೀಜಗಳಿಗೆ ಮೊರೆ ಹೋಗಿಯಾಗಿದೆ). ರೈತರ ಮೇಲೆ ಲಾಭದಾಯಕ ಬೆಳೆಗಳನ್ನೇ ಬೆಳೆಯುವಂತೆ ಒತ್ತಡಗಳುಂಟಾಗಬಹುದು ( ಈಗಾಗಲೇ ಸಾಲ, ಹೆಚ್ಚುತ್ತಿರುವ ಕೃಷಿ ಖಚರ್ುಗಳಿಂದ ಅನಿವಾರ್ಯವಾಗಿ ರೈತ ಬೆಳೆದ ಬೆಳೆಯಲ್ಲಿ ಒಂದು ಕಾಳನ್ನೂ ತನಗೆಂದು ಇರಿಸಿಕೊಳ್ಳದೇ ಮಾರುಕಟ್ಟೆಗೆ ಸಾಗಿಸಬೇಕಾದ ಪರಿಸ್ಥಿತಿಯಲ್ಲಿದ್ದಾನೆ). ಸದ್ಯ ನಮ್ಮ ಕೃಷಿಗೆ ಈಗಿರುವ ಸ್ಥಿತಿಯಲ್ಲಿ ವಿದೇಶಿ ಬಂಡವಾಳಕ್ಕಿಂತಲೂ ಸಕರ್ಾರದ ಸಬ್ಸಿಡಿಗಳ ಅವಶ್ಯಕತೆಯಿದೆ. ಏಕೆಂದರೆ ಕೃಷಿ ವೆಚ್ಚ ಗಣನೀಯವಾಗಿ ಹೆಚ್ಚುತ್ತಿದೆ ಅದಕ್ಕೆ ತಕ್ಕಂತೆ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುತ್ತಿಲ್ಲ (ಕೃಷಿ ಉತ್ಪನ್ನಗಳು ಮೂಲಭೂತ ಅವಶ್ಯಕತೆಗಳಾದ ಧಾನ್ಯ, ಎಣ್ಣೆ ಕಾಳುಗಳು, ತರಕರಿಗಳು ಮುಂತಾದವುಗಳನ್ನು ಒಳಗೊಂಢಿರುವುದರಿಂದ ಅದು ಸುಲಭ ಸಾಧ್ಯವೂ ಅಲ್ಲ). ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಆಥರ್ಿಕ ಸ್ಥಿರತೆಯನ್ನು ನಿರ್ಧರಿಸುವ ಕೃಷಿಯಂತಹ ಉದ್ಯಮವೊಂದು ವಿದೇಶಿಯರ ಬಂಡವಾಳದ ಮೇಲೆ ಅವಲಂಬಿತವಾಗುವುದು ಭದ್ರತೆಯ ದೃಷ್ಟಿಯಿಂದಲೂ ಯೋಚಿಸಬೇಕಾದ ವಿಷಯ.

ಮಾತು-ಮೌನ

ಮೌನವೂ ಕೆಲವೊಮ್ಮೆ ಬಸವಳಿದುಬಿಡುತ್ತದೆ,
ಏನನ್ನೂ ಹೇಳುವ ಹಂಬಲವಿಲ್ಲದೇ.
ಬಂಗಾರದಂತಹ ಮೌನ ಕಾಸಿಗೂ ಕಡೆಯಾಗಿಬಿಡುತ್ತದೆ,
ಮಾತೆಂಬ ಸೇವಕನ ಬೆಂಬಲವಿಲ್ಲದೇ.

ನಾವು ನಿಂತ ನೆಲ ನಮ್ಮದಾಗಬೇಕು,
ನಮ್ಮ ಮನದ ಮಾತು ಸ್ವಂತದ್ದಾಗಬೇಕು,
ಬದುಕಿರುವವರೆಗೂ ಗೌರವದ ಬದುಕೊಂದು ನಮ್ಮ ಜೊತೆಗಿರಬೇಕೆಂದರೆ...
ಹಕ್ಕುಗಳ ಬೇಲಿಯೊಂದು ನಮ್ಮ ಸುತ್ತಲಿರಬೇಕು,
ಮತ್ತು ಮಾತುಗಳಿಂದಲೇ ಅದರ ನಿಮರ್ಾಣವಾಗಬೇಕು.

ಕೆಲವನ್ನು ಅಭಿನಂದಿಸಬೇಕು,
ಕೆಲವನ್ನು ಪ್ರತಿಬಂಧಿಸಬೇಕು,
ಕೆಲವನ್ನು ಹಲುಸಾಗಿ ಬೆಳೆಸಬೇಕು,
ಮತ್ತೆ ಕೆಲವನ್ನು ಮೊಳಕೆಯಲ್ಲೇ ಚಿಗುಟಿ ಹಾಕಬೇಕು

ಇಷ್ಟೆಲ್ಲವನ್ನೂ ಮೌನ ಎಂದಿಗೂ ಮಾಡಲಾರದು.
ಅದಕೆಂದೇ ನಾವು ಮಾತನಾಡಬೇಕು.
ನಾವು ಮಾತನಾಡಬೇಕು, ನಮಗಾಗಿ
ನಾವು ಏನೆಂದು ಅರಿತುಕೊಳ್ಳಲು ಬಯಸುತ್ತಿರುವ ಈ ಜಗಕಾಗಿ.

Tuesday, February 8, 2011

ಗತ

ಎಂದೋ ಅರಳಿ ನಕ್ಕ ಹೂ
ಇಂದೇಕೆ ಜೀವ ಹಿಂಡುತಿದೆ
ಅಂದು ಅದರಂದವನು
ನೋಡಿಯೂ ನೋಡದ ಹಾಗೆ
ಸುಮ್ಮನಿದ್ದುಬಿಟ್ಟೆ
ಅದರ ಆದರ ಅಭಲಾಷೆಗಳನು
ತಿಳಿದೂ ತಿಳಿಯದ ಹಾಗೆ
ಸಾಗಿ ಬಂದುಬಿಟ್ಟೆ
ಆದರಿಂದು ಅಂದ, ಕಂಪು, ಆಹ್ವಾನದ ನಗುವು
ಎಲ್ಲವನೂ ಹೊತ್ತು ದಿಗ್ಗನೆದ್ದು ನಿಂತು ಬಿಟ್ಟಿದೆ
ಮನದ ಸ್ಮರತಿ ಪಟಲದಲಿ

ವರುಷಗಳೇ ಉರುಳಿದವು
ಹೂವಿನ ಪಕಳೆಗಳುದುರಿ
ಮಗಿ ಕಾಯಾಗಿ ಹಣ್ಣು ಬೀಜಗಳಾಗಿ
ಮತ್ತಷ್ಟು ವೃಕ್ಷಗಳೇ ಬೆಳೆದಿರಬೇಕು

ಸಮಯ ನಿಂತ ನೀರಲ್ಲವೆಂಬ ಮಾತು
ನೆನಪಾಗುವಷ್ಟರಲ್ಲಿ, ಬಯಸಿದ ನೀರು
ಹರಿದು ಮುಂದೆ ಹೋಗಿರುವುದು, ಇನ್ನಾರ ಪಾಲಿಗೋ
ಈಗಲಾದರೂ ಬಂದ ನೀರನ್ನೇ
ಬೊಗಸೆ ತುಂಬಿಕೊಂಡುಬಿಡಬೇಕೆಂದರೆ
ಕಡು ಬೇಸಿಗೆ,
ಹರಿವ ನೀರು ಪಾತಾಳ ಸೇರಿದೆ, ಕೈಗೆಟುಕದಂತೆ
ನಾನೂ ಕಾದು ಕುಳಿತಿದ್ದೇನೆ,
ಪ್ರವಾಹವನೇ ಉಕ್ಕಿ ಹರಿಸುವ ಒಂದು ಮಳೆಗೆ
ಸ್ವಾತಿಗಾಗಿ ಕಾಯ್ದ ಕಪ್ಪೆ ಚಿಪ್ಪಿನಂತೆ

ನಡೆದುಬಿಡಬೇಕು

ತುಂಬು ಮನಸಿನ ಪ್ರತಿ ಮಾತಿನಲೂ
ಜೀವದೊಲುಮೆಯ ಸೆಲೆಯಿರಬೇಕು.
ಕಣ್ಣು ಕಾಣುವ ಪ್ರತಿ ಕನಸಿನಲೂ
ಬರಿಯ ವೈಭವದ ಮೆರವಣಿಗೆಗಳೇ ನಡೆದಿರಬೇಕು

ಜೀವನದ ಪ್ರತಿ ತಿರುವುಗಳೂ ಗೊಂದಲದ ಗೂಡುಗಳೇ,
ಸರಿ ದಾರಿಯಲಿ ಕ್ರಮಿಸಿದರೆ ತಾನೇ
ಕನಸುಗಳೆಲ್ಲ ನನಸಿನ ಮನೆ ಸೇರುವುದು

ಮಲಗಿ ಏಳುವ ನಡುವೆ ಗಂಟೆಗಳೇ ಸರಿದಿರುತ್ತವೆ
ಎನೋ ಮಾಡಲೆಂದು ಯೋಚಿಸುವ ಮೊದಲೇ
ದಿವಸಗಳೇ ಸರಿದಿರುತ್ತವೆ
ಕೂಡಿ ಕಳೆದು ಗುಣಿಸಿ ಬಾಗಿಸಿ
ಕೊನೆಗೆ ನಿರ್ಧರಿಸಿ ಬದುಕಲು
ಸಾವಿರ ವರುಷಗಳಿಲ್ಲ ಜೀವನದಲ್ಲಿ
ಯೌವನದ ಪ್ರತಿ ಕ್ಷಣಗಳೂ ಕೌತುಕದ ಮುದ್ರಿಕೆಗಳೇ,
ಒತ್ತಿಬಿಡಬೇಕು ಜೀವನದ ಹಾಳೆಗಳ ಮೇಲೆ.
ಸರಿಯೋ ತಪ್ಪೋ ಯೋಚಿಸಲೆಂದು
ಕಣ್ಣು ಕಾಣದ ಕಿವಿಯು ಕೇಳದ ಮನಸು ಮಾತ್ರ ಮಂಥಿಸುವ
ಮುಪ್ಪು ಇದ್ದೇ ಇದೆಯಲ್ಲವೇ

ಎಂದೋ ಪಡೆದ ತಿರುವು ಅಂದು ಎಲ್ಲಿಗೋ ಎಳೆದು ನಿಲ್ಲಿಸಿರಬಹುದು,
ಹಿಂತಿರುಗುವೆನೆಂದರೂ ದಾರಿ ಗೊತ್ತಾಗದಂತೆ.
ಮುಂದಿನ ಬಗ್ಗೆ ಇಂದು ನಿಂತು ನೆನೆಸಿದಾಗ ತಾನೇ
ಚಿಂತಿಸುವ ವ್ಯರ್ಥ ಗೊಡವೆ.
ನಿಲ್ಲದೇ ನಡೆದರಾಯಿತು, ದಾರಿ ಮುಗಿಯುವತನಕ
ಇಲ್ಲವೇ ನಾನು ಮುಗಿಯುವತನಕ

Monday, February 7, 2011

ಎರಡು ಮುಖಗಳು

ಬದುಕಿನ ಪ್ರತಿ ಅಡ್ಡ ದಾರಿಗೂ ಒಂದು ಕೊನೆಯಿರುವುದು
ಮುಖ್ಯ ದಾರಿಗಿರುವಂತೆಯೇ
ಪ್ರತಿ ಸುಳ್ಳಿಗೂ ಒಂದು ಬೆಲೆಯಿರುವುದು
ಸತ್ಯಕ್ಕಿರುವಂತೆಯೇ
ಪ್ರತಿ ಮೋಸಕ್ಕೂ ಒಂದು ಮೌಲ್ಯ ಸಿಗುವುದು
ಪ್ರಾಮಾಣಿಕತೆಗೆ ಸಿಕ್ಕಂತೆಯೇ
ಪ್ರತಿ ಕನಸಿಗೂ ಒಂದು ಖುಷಿಯಿರುವುದು
ನನಸಿಗಿರುವಂತೆಯೇ
ಆದರೂ...
ಅಡ್ಡದಾರಿಯಲಿ ಸುಳ್ಳಿನ ಸೆರಗನೊದ್ದು
ಮೋಸ ಮಾಡಿ ಗಳಿಸಿದ ಪ್ರತಿಯೊಂದು ಸಿಖಗಳೂ
ಏತಕೋ ಕರಗಿ ಹೋಗುತ್ತವೆ ಕನಸಿನಂತೆಯೇ
ನೋವುಗಳು ಮಾತ್ರ ಮನ ತುಂಬಿಕೊಳ್ಳುತ್ತವೆ ನನಸಿನಂತೆಯೇ

ಕವನದಂತಹ ಸಾಲುಗಳು

ಕೆಲ ಸಂದಿಗ್ಧಗಳು ಜೀವವನ್ನೇ ಹಿಂಡುತ್ತವೆ,
ಏನೊಂದೂ ಅರ್ಥವಾಗದೇ...
ಬದುಕು ಹೀಗೇ ಇರಬೇಕೆಂದು ಬಯಸಿದ
ಮನಸು ಘಾಸಿಯಾದ ಪ್ರತಿ ಕ್ಷಣಗಳೂ
ಬಹುಶಃ ಹೀಗೆಯೇ ಇರುತ್ತವೆಯೆನೋ

ಎದೆಯಲೊಸರುವ ಪ್ರತಿಯೊಂದು ನೋವಿಗೂ
ಪದಗಳು ಸಿಗುವುದು ಅಪರೂಪ
ಆದರೂ ಪ್ರತಿ ನೋವಿನ ಕ್ಷಣದಲೂ
ಏನಾದರೊಂದು ಬರೆಯಬೇಕೆನಿಸುತ್ತದೆ
ಏನೂ ಬರೆಯಲಾಗದೇ ಮನ ತಡವರಿಸುತ್ತದೆ
ತಡವರಿಸಿ ಬರೆದ ಮಾತುಗಳೆಲ್ಲ ಬಿಕ್ಕಲನ ಮಾತಿನಂತೆ
ತಾಳ್ಮೆಯಿದ್ದರೆ ತಿಳಿದಾವೂ...
ಇಲ್ಲವೆಂದರೆ ಪದಪುಂಜ ಪದಬಂಧದಂಂತೆ ಭಾಸವಾಗಿ
ಪುಸ್ತಕವಾದರೆ ಪುಟ ತಿರುವಿ, ಹಾಳೆಯಾದರೆ ಹರಿದೆಸೆದು
ಮುಂದೆ ನಡೆದಾರೂ...

ಹುಚ್ಚು ಕುತೂಹಲಕೊಂದು ಚಿಕ್ಕ ಪೂರ್ಣವಿರಾಮ ಇಡುವೆನೆಂದರೂ
ಮನಸು ಕೇಳುವುದುದೊಡ್ಡ ಪೂರ್ಣವಿರಾಮ ಎಂತಹುದು?
ಆದರ ಈದರಗಳನ್ನೆಲ್ಲ ಬದಿಗೆ ಸರಿಸಿದಾಗಲೂ
ನಾನು ಬರೆದುದು ಶ್ರೇಷ್ಠವೇ, ಏಕೆಂದರೆ
ನನ್ನ ಮನದ ಸಂದಿಗ್ಧಗಳಿಗೆಲ್ಲ ನಿರಾಳತೆಯ ಸಿಂಚನವನುಣಿಸಿದ ಸಾಲುಗಳವು