Thursday, December 31, 2009

ಸಾಹಸ ಸಿಂಹ ನಿಗೆ ಭಾವಪೂರ್ಣ ಶ್ರದ್ದಾಂಜಲಿ

Monday, October 12, 2009

ಕನಸು
ಕಣ್ಣಿಗೇನು ಕೆಲಸ? ಕನಸು ಕಾಣುತ್ತದೆ ಮನಸಿಗೆ ಬಂದಂತೆ,
ಹಗಲು ಇರುಳಿನ ಭೇದವಿಲ್ಲದೆ, ಅವರ ಇವರ ಗೊಡವೆಯಿಲ್ಲದೆ.
ಕೆಲ ಸಾರಿ ನನ್ನ ಕನಸುಗಳಿಗೆ ನಾನೇ ನಾಚುತ್ತೇನೆ, ಬೆಚ್ಚಿ ಬೀಳುತ್ತೇನೆ.
ಸರಿ ತಪ್ಪುಗಳ ಚಿಂತೆಯಾದರೂ ಬೇಡವೇ? ನಾಚಿಕೆಯಿಲ್ಲದ್ದು.
ಜಗತ್ತೇನು ಚಿಕ್ಕದೇ! ಗೆದ್ದು ಬಿಡಬೇಕೆನ್ನುತ್ತದೆ,
ಆಳ ಅಗಲಗಳ ಅರಿವೆಯಿಲ್ಲದ ಬುದ್ಧಗೇಡಿ.
ಬೈದರಿಲ್ಲ, ಉಗಿದರಿಲ್ಲ. ತನ್ನ ಪಾಡಿಗೆ ತಾನು ಓಡುತ್ತಲೇ ಇರುತ್ತದೆ, ಹುಚ್ಚು ಕುದುರೆ.

ಏನೂ ಇರದ ಬದುಕಿನಲ್ಲೂ ಬಣ್ಣವನು ಬಿತ್ತುತ್ತದೆ
ಕಾಣದ ನಾಳೆಗೂ ರೆಕ್ಕೆಯನು ಕಟ್ಟುತ್ತದೆ
ಪ್ರತಿ ಬಿಕ್ಕಳಿಕೆಗೂ ಏನೊ ಒಂದು ಅರ್ಥ, ಯಾರೋ ಬಂದಂತೆ ಬದುಕಿನಲಿ.
ಪ್ರತಿ ಬಯಕೇಗೂ ಒಂದು ಚಿತ್ರ, ಬರೆದು ತೋರಿಸುವುದು ಕ್ಷಣದಲಿ
ನನಸಾಗುವುದೋ, ಮಣ್ಣಾಗುವುದೋ ಆದರೂ ಈ ಕ್ಷಣಗಳಿಗೆ ಬಣ್ಣ ತುಂಬುವ ಕಲೆಗಾರ
ಅದಕೇ ಎಂಥ ಬುದ್ದಿಗೇಡಿಯಾದರೂ, ನನ್ನ ಕನಸೇ ನನ್ನ ಜೊತೆಗಾರ

Wednesday, September 30, 2009

ಹೀಗೊಂದು ದಾರಿ

ಇಲ್ಲಿಯವರೆಗೂ ನಾ ನಡೆದ ಪ್ರತಿಯೊಂದು ದಾರಿಗೂ ಕವಲುಗಳಿದ್ದವು
ಇಂದೇಕೊ ಇರುವ ದಾರಿಗೂ ಮುಳ್ಳು ಜಡಿದಂತೆ ಕಾಣುತ್ತಿದೆ
ಬೆಳಗಾಯಿತು, ಎಲ್ಲರು ಎದ್ದರು, ನಾನೂ ಎಳಲೇ?
ಅವರೆಲ್ಲ ಹೊರಟಾಯ್ತು, ಅವರವರ ಕೆಲಸಕ್ಕೆ, ನಾನು?
ಪ್ರತಿ ಸೂಯರ್ೊದಯವೂ ಎದೆಯಲ್ಲಿ ನಡುಕ ಹುಟ್ಟಿಸಿತ್ತಿದೆ
ಸಕ್ಕರೆ ಟೀ ಪುಡಿಯಿದ್ದರೆ ಸಾಕೇ? ಹಾಲಿರಬೇಕು, ಗ್ಯಾಸಿರಬೇಕು
ಅಕ್ಕಿ ಬೆಂದರೆ ಸಾಕೇ? ಉಪ್ಪಾದರೂ ಬೇಡವೇ ನೆಂಜಿಕೊಳ್ಳಲು?

ನಡೆವ ದಾರಿಯ ಇಕ್ಕೆಲಗಳಲ್ಲೂ ಜನಜಾತ್ರೆ, ಎಲ್ಲರೂ ಅಪರಿಚಿತರೇ
ಪರಿಚಯ ಬೆಳೆಸಲು ಏನೋ ಮುಜುಗುರ, ಏನೆಂದುಕೊಳ್ಳುತ್ತಾರೋ!
ಪ್ರತಿ ಪ್ರಶ್ನೆಗೂ ಉತ್ತರವಿದೆಯೆಂದಾದರೆ
ನನ್ನ ಬದುಕು ಬಹುಶಃ ಪ್ರಶ್ನೆಯೇ ಆಗಿರಲಿಕ್ಕಿಲ್ಲ
ಪ್ರತಿ ಬದುಕಿಗೂ ಒಂದು ಅರ್ಥವಿದೆಯೆಂದಾದರೆ
ನನ್ನ ಬದುಕು ಬಹುಶಃ ಬದುಕೇ ಆಗಿರಲಿಕ್ಕಿಲ್ಲ!

Tuesday, September 29, 2009

ಕ್ರೂರ ಮೌನ!

ಮೌನದ ಚೀರಾಟವೂ ಒಮ್ಮೊಮ್ಮೆ ಇಷ್ಟೊಂದು ಕರ್ಕಶವಾಗಿರುತ್ತದೆ.
ಎದೆಯಲಿ ಪ್ರೇಮ ಪಲ್ಲವಿಸಿದಾಗ, ಪ್ರತಿಕ್ರಿಯಿಸದೆ ತಲೆ ತಗ್ಗಿಸಿ,
ಮೌನ ಗೌರಿಯಂತೆ ನಡೆದು ಹೋಗುವ ಪ್ರೇಯಸಿಯ ಮೌನ.
ಕಣ್ಣೋಟಕ್ಕೇ ಪ್ರಾಣ ಬೇಕಾದರೂ ಕೊಟ್ಟೇನೆಂಬ ಬಿಂಕದ
ಓಲೆಗೂ ಮಾರುತ್ತರ ನೀಡದ ಮೌನ
ಕಿಚಾಯಿಸಿ, ಕಣ್ ಹೊಡೆದು, ಮೈಮುಟ್ಟಿ ಓಡಿ ಹೋದರೂ
ಒಂದು ಮಾತನೂ ಬೈಯದ ಮೌನ...

ಮೌನವನೇ ಒಪ್ಪಿಗಯೆಂದು ಬಗೆದು,
ರಾತ್ರಿಯೆಲ್ಲಾ ನಿದ್ರೆಯಿರದ ಕನಸು.
ಬೆಳಿಗ್ಗೆಯೆದ್ದಾಗ ನನ್ನ ಶವದ ಮೇಲೆ ಮಂಟಪ ಕಟ್ಟುತ್ತಿದ್ದಾರೆ,
ಅವಳ ಮದುವೆಯ ಮಂಗಳ ಕಾರ್ಯಕೆ.
ಈಗಲೂ ಮಾತಿಲ್ಲ, ಮೌನವಾಗಿಯೇ ಅವನೊಡನೆ ಸಪ್ತಪದಿ ತುಳಿಯುತ್ತಿದಾಳ.ೆ
ಹೌದು, ಮೌನದ ಚೀರಾಟವೂ ಒಮ್ಮೊಮ್ಮೆ ಇಷ್ಟೊಂದು ಕರ್ಕಶವಾಗಿರುತ್ತದ.ೆ..

ಹೊಸದೆನನೋ ಹುಡುಕಿ!

ಯಾಕೋ ಮನಸ್ಸು ಕಹಿಯಾಗಿದೆ
ದಿನದ ಬದುಕನು ಬದುಕಿ, ಅದೇ ದಿನಚರಿಯಲಿ ಸಿಲುಕಿ
ಬರಿಯ ಹಳತೇ ಕಲೆತು ಕಹಿಯಾಗಿದೆ
ಹೊಸತನವೇನೊ ಬೇಕೆನಿಸುತಿದೆ
ಕಾದಂಬರಿಯ ಪುಟ ತೆರೆದರೂ ಅವೇ ಪಾತ್ರಗಳು
ಸಿನಿಮಾದ ಒಳಗಿಳಿದರೂ ಅವೇ ದೃಶ್ಯಗಳು
ನಾಟಕ, ಪತ್ರಿಕೆ, ಪ್ರವಾಸ ಎಲ್ಲವೂ ಹಿಂದಿನಂತೆಯೇ...

ನಾ ನೋಡದ ಲೋಕವೊಂದಿದೆ ಎಂದೇನೋ ಭರವಸೆ
ಅಲ್ಲಿ ಎಲ್ಲವೂ ಇದ್ದಂತಿರದು
ಏನೋ ಹೊಸತು, ಹೊಸ ರಾಗದ ಸಂಗೀತ
ಹೊಸ ಪಾತ್ರಗಳ ಹೊಸಹೊಸ ಕತೆಗಳು
ದೊರೆತಾವೆಂಬ ಆಸೆ
ಬದುಕು ನಿಂತ ನೀರೆನ್ನಿಸಿದಾಗ ಸಾವು ಎಂಥ ಅನಿವಾರ್ಯವಲ್ಲವೇ!