Tuesday, April 3, 2012

ಬೆತ್ತಲಾಗುವ ತವಕ

ಪ್ರತಿಯೊಬ್ಬನೂ ಜೀವನದ ಯಾವುದೋ
ಒಂದು ಕ್ಷಣದಲಿ ಬೆತ್ತಲಾಗಬಯಸುತ್ತಾನೆ.
ಸಾದ್ಯವಾಗದೇ ಸುಮ್ಮನಾಗುತ್ತಾನೆ.

ಒಂದೆಳೆಯ ಲವಲೇಶವೂ ಇಲ್ಲದಂತೆ ಬೆತ್ತಲಾಗಬೇಕು,
ಈ ಜಗದ ನೋಟವೇ ನನ್ನ ಪಾಲಿಗೆ ಕತ್ತಲಾಗಬೇಕು.
ಆದರೆ,
ಬದುಕಿನ ತುಂಬ ನೂರು ಬಣ್ಣದ,
ಸಾವಿರ ವೇಷದ ಪೋಷಾಕುಗಳು
ಯಾವೂದನ್ನೂ ಮೀರಲು ಸಾದ್ಯವಾಗದೇ
ದಿನವೂ ಹೊಸದೊಂದು ಪೋಷಾಕಿನ
ಕದಂಬ ಬಾಹುವಿನಲ್ಲಿ ಸಿಕ್ಕುತ್ತಿದ್ದೇನೆ.
ನನ್ನ ಬಣ್ಣಗಳೇ ನನಗೆ ಘಾಟೆನ್ನಿಸಿದರೂ
ಅಳಿಸಲಾಗದೇ, ಭರಿಸಲಾಗದೇ ಬಿಕ್ಕುತ್ತಿದ್ದೇನೆ.

ಬೆತ್ತಲೆನ್ನುವುದು ಎಲ್ಲರೂ ಮುಟ್ಟಲಾಗದ
ಮೇರು ಪರ್ವತದ ಎತ್ತರವದು.
ಜೀನದ ಜಂಜಾಟಗಳನ್ನೆಲ್ಲಾ ಕಳೆದುಕೊಂಡು
ಪ್ರಶಾಂತವಾಗಿ ಅಲ್ಲೊಮ್ಮೆ ನಿಂತುಬಿಡಬೇಕು,
ಪದ್ಮಾಸನ ಹಾಕಿ ಕುಂತುಬಿಡಬೇಕು.
ಆದರೆ,
ಬೆತ್ತಲಾಗುವುದು ಎಲ್ಲರಿಗೂ ಸಾದ್ಯವಿಲ್ಲ.
ಎಲ್ಲೋ ಒಬರ್ಬು ಬೆತ್ತಲಾಗುತ್ತಾರೆ,
ಬಾಹುಬಲಿಯಂತೆ, ಅಕ್ಕ ಮಹಾದೇವಿಯಂತೆ.
ಜಗವನೇ ಗಲ್ಲುವೆನೆಂದ ಅಲೆಕ್ಸಾಂಡರ್
ಬರಿಗೈಗಳ ತೋರಲಷ್ಟೇ ಸಫಲನಾದ.
ಏನೂ ಮಾಡದೇ ಥೀಯೋಡರಸ್
ಸಂಪೂರ್ಣ ಬೆತ್ತಲನಾದ.
ನಾನೂ ಅಲೆಕ್ಸಾಂಡರ್ನೇ...
ಇದ್ದುದೆಲ್ಲವ ಬಿಟ್ಟು ಇಲ್ಲದಿರುವುದ ಹುಡುಕಿ
ಏನೂ ಪಡೆಯದೇ ನಡೆದುಬಿಡುವ ಜಗದೇಕವೀರ.