Tuesday, February 8, 2011

ನಡೆದುಬಿಡಬೇಕು

ತುಂಬು ಮನಸಿನ ಪ್ರತಿ ಮಾತಿನಲೂ
ಜೀವದೊಲುಮೆಯ ಸೆಲೆಯಿರಬೇಕು.
ಕಣ್ಣು ಕಾಣುವ ಪ್ರತಿ ಕನಸಿನಲೂ
ಬರಿಯ ವೈಭವದ ಮೆರವಣಿಗೆಗಳೇ ನಡೆದಿರಬೇಕು

ಜೀವನದ ಪ್ರತಿ ತಿರುವುಗಳೂ ಗೊಂದಲದ ಗೂಡುಗಳೇ,
ಸರಿ ದಾರಿಯಲಿ ಕ್ರಮಿಸಿದರೆ ತಾನೇ
ಕನಸುಗಳೆಲ್ಲ ನನಸಿನ ಮನೆ ಸೇರುವುದು

ಮಲಗಿ ಏಳುವ ನಡುವೆ ಗಂಟೆಗಳೇ ಸರಿದಿರುತ್ತವೆ
ಎನೋ ಮಾಡಲೆಂದು ಯೋಚಿಸುವ ಮೊದಲೇ
ದಿವಸಗಳೇ ಸರಿದಿರುತ್ತವೆ
ಕೂಡಿ ಕಳೆದು ಗುಣಿಸಿ ಬಾಗಿಸಿ
ಕೊನೆಗೆ ನಿರ್ಧರಿಸಿ ಬದುಕಲು
ಸಾವಿರ ವರುಷಗಳಿಲ್ಲ ಜೀವನದಲ್ಲಿ
ಯೌವನದ ಪ್ರತಿ ಕ್ಷಣಗಳೂ ಕೌತುಕದ ಮುದ್ರಿಕೆಗಳೇ,
ಒತ್ತಿಬಿಡಬೇಕು ಜೀವನದ ಹಾಳೆಗಳ ಮೇಲೆ.
ಸರಿಯೋ ತಪ್ಪೋ ಯೋಚಿಸಲೆಂದು
ಕಣ್ಣು ಕಾಣದ ಕಿವಿಯು ಕೇಳದ ಮನಸು ಮಾತ್ರ ಮಂಥಿಸುವ
ಮುಪ್ಪು ಇದ್ದೇ ಇದೆಯಲ್ಲವೇ

ಎಂದೋ ಪಡೆದ ತಿರುವು ಅಂದು ಎಲ್ಲಿಗೋ ಎಳೆದು ನಿಲ್ಲಿಸಿರಬಹುದು,
ಹಿಂತಿರುಗುವೆನೆಂದರೂ ದಾರಿ ಗೊತ್ತಾಗದಂತೆ.
ಮುಂದಿನ ಬಗ್ಗೆ ಇಂದು ನಿಂತು ನೆನೆಸಿದಾಗ ತಾನೇ
ಚಿಂತಿಸುವ ವ್ಯರ್ಥ ಗೊಡವೆ.
ನಿಲ್ಲದೇ ನಡೆದರಾಯಿತು, ದಾರಿ ಮುಗಿಯುವತನಕ
ಇಲ್ಲವೇ ನಾನು ಮುಗಿಯುವತನಕ

No comments: