Sunday, November 10, 2013

ninna nenpu

ನೀ ಹೋದ ಮೇಲೂ, ಬೀಸುತಿದೆ ಗಾಳಿ,
ನಿಂತಿಲ್ಲ ಎದೆಯಲಿ, ನಿನ ನೆನಪುಗಳಾ ದಾಳಿ
ಕದ್ದು ಕದ್ದು ನೋಡಿದ, ಕಣ್ಣಿನಲ್ಲೇ ಹಾಡಿದ
ಮಲ್ಲಿಗೆಯ ಹೂವಂತೆ, ದಿನದಲೇ ಬಾಡಿದ
ಈ ಮನಸಿನ ಬೇಗೆ, ತಿಳಿಯದೇ ನಿನಗೆ. //ಪ//

ಪ್ರತಿಯೊಂದು ಮಾತಿನಲೂ, ಪ್ರೀತಿಯದೇ ನೆನಪುಗಳು
ಪ್ರೀತಿಯೇ ತೊರೆದರೇ... ಏನಿದೆ ಆಸರೆ..?
ನಾ ನನ್ನಿಂದ ದೂರಾಗಿ, ನಿನ್ನಿಂದ ಬೇರಾಗಿ ಬದುಕುತಲಿರುವೆ.
ನೀ ತಿರುಗಿ ನೋಡುತ, ಕಣ್ಣಲಿ ಕೊಲ್ಲುತ ಕೆಣಕುತಲಿರುವೆ.
ಮೋಡದಲಿ ಮೂಡಿದ, ಊಹೆಯ ಚಿತ್ರದಾ
ಹಾಗೆ ಚಂಚಲೆಯಾದರೆ ಅರಿಯಲಿ ಹೇಗೆ ? //1//

ಮಂಗಳನ ಅಂಗಳದಲಿ, ಮನೆಮಾಡಿ ಇರಬಹುದು
ಹುಡುಗಿಯ ಎದೆಯಲೀ... ಇಳಿಯಲು ಆಗದು.
ಹನಿ ನೀರನು ಮುಟ್ಟದೇ, ಸಾಗರಗಳನೇ, ಈಜಲುಬಹುದು
ಕಣ್ಣ ಹನಿಯು ಮೂಡದೇ, ಬಾಳಿನ ದಾರಿಯ, ನಡೆಯಲು ಬರದು.
ಕೊನರುವ ಕನಸಿಗೆ, ಕಂಬನಿ ಕಾಣಿಕೆ
ನೀಡಿದ ಮೋಸ ಮರೆಯಲಿ ಹೇಗೆ..?    //2//

ಕಡಲಿಗೊಡೋ ನದಿಗೇಕೆ ದಡದಾ ಗೊಡವೆ ?
ನೀನಾರಿಗೋ ಬಯಸಿರೆ ನಾ ಹೇಗೆ ತಡೆವೆ ?
ನಾ ನೆಟ್ಟಿದ ಪ್ರೀತಿಯ ಬಳ್ಳಿ
ನೀ ಅಪ್ಪದೆ ದೂರಕೆ ತಳ್ಳಿ
ಚಿಗುರಿಸುವಾಸೆಯೇಕೆ ?        //3//

Sunday, February 17, 2013

ನಾನೂ ಕಂಡೆ ಚಮಂತಕ ಮಣಿಯೊಂದನು...

          ಯಾಕೆ ಲೇಟು? ಎಂಬ ಚಿಕ್ಕ ಪ್ರಶ್ನೆಗೂ ನಮ್ಮ ಬಳಿ ಒಂದು ಉತ್ತರ ಸಿದ್ಧವಿರುತ್ತದೆ. ಟ್ರಾಫಿಕ್ ಜಾಮ್ ಎಂದೋ, ಗಾಡಿ ಕೈ ಕೊಟ್ಟಿತೆಂದೋ... ಯಾಕೆ ಪರೀಕ್ಷೆಯಲ್ಲಿ ಫೇಲಾದೆ? ಎಂಬ ದೊಡ್ಡ ಪ್ರಶ್ನೆಗೂ ನಮ್ಮಲ್ಲಿ ಉತ್ತರ ಸಿದ್ಧವಿರುತ್ತದೆ. ನಿರೀಕ್ಷಿಸಿದ ಪ್ರಶ್ನೆಗಳು ಬರಲಿಲ್ಲವೆಂದೋ, ಸರಿಯಾಗಿ ವ್ಯಾಲ್ಯುವೇಷನ್ ಆಗಿಲ್ಲವೆಂದೋ... ನಾವು ಕೊಡುವ ಸಮಜಾಯಷಿಗಳನ್ನು  ಎದುರಿನವರು ಒಪ್ಪಲಿ ಎಂಬುದಕ್ಕಿಂತ ನಮ್ಮ ಆತ್ಮಸಾಕ್ಷಿಯನ್ನು ಒಪ್ಪಿಸುವತ್ತ ನಮ್ಮ ಮಗ್ನತೆಯಿರುತ್ತದೆ. ಆದರೆ ಆ ಅನಾನುಕೂಲತೆಗಳನ್ನು ಮೀರಿ ಗುರಿ ತಲುಪುವ  ಸಾದ್ಯತೆಯಿತ್ತಾ? ಎಂಬುದನ್ನು ನಾವು ಯೋಚಿಸಲು ಹೋಗುವುದಿಲ್ಲ.
           ಇಷ್ಟೆಲ್ಲ ಚಿಂತಿಸಲು ಕಾರಣ ಇಂದು ಎ. ಆರ್. ಮಣಿಕಾಂತ್ರವರ 'ಅಪ್ಪ ಅಂದ್ರೆ ಆಕಾಶ' ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಮಣಿಕಾಂತರೆಂದೊಡನೆ ನನಗೆ ಮೊದಲು ನೆನಪಾಗುವುದು ಅವರು ಬರೆಯುತ್ತಿದ್ದ 'ಹಾಡು ಹುಟ್ಟಿದ ಸಮಯ' ಅಂಕಣ. ನಾನೂ ಸಿನಿಮಾ ವ್ಯವಸಾಯಿಯಾಗಿದ್ದರಿಂದಲೋ ಏನೋ ಆ ಅಂಕಣ ನನಗೆ ಬಹಳ ಆಪ್ತವಾಗಿತ್ತು. ಸತತ ಎರಡು ವರ್ಷಗಳ ಕಾಲ ಮೂಡಿಬಂದ ಅದು ಪ್ರತಿವಾರವೂ ಹಳೆಯ ಜನಪ್ರೀಯ ಕನ್ನಡ ಹಾಡೊಂದು ಹುಟ್ಟಿದ ಬಗೆ, ಅದು ಬೆಳೆದ ರೀತಿ, ಜನಪ್ರೀಯವಾದ ಪರಿಯನೆಲ್ಲ ವಿವರವಾಗಿ ಹೃದಯಕ್ಕೆ ನಾಟುವಂತೆ ಇವರಿಸುತ್ತಿದ್ದ ರೀತಿ ಅನನ್ಯ. ಗೀತರಚನೆಕಾರ, ಸಂಗೀತ ನಿರ್ದೇಶಕ, ಗಾಯಕ ಹೀಗೆ ಯಾರನ್ನು ಮಾತಾಡಿಸಲು ಸಾದ್ಯವೋ ಅವರನ್ನೆಲ್ಲ ಮಾತಾಡಿಸಿ, ಮಾಹಿತಿ ಕಲೆಹಾಕಿ ಅವರ ಮಾತಿನ ಲಹರಿಗೊಂದು ತಮ್ಮದೇ ಭಾವ ಲಹರಿಯನ್ನು ಬೆಸೆದು ಒಂದು ಸುಂದರ ಪದಚಿತ್ರಣವನ್ನೇ ಸೃಷ್ಟಿಸಿ ಆ ಕವನಕೊಂದು ಕಥನ ರೂಪಿಸುತ್ತಿದ್ದರು. ಅದಕ್ಕೇ ಹಾಡುಹುಟ್ಟಿದ ಸಮಯ ಅಂಕಣವನ್ನು ಓದುವಾಗಲೆಲ್ಲಾ ಅದೊಂದು ಉತ್ತಮ ಪರಿಶ್ರಮದ ಅಂಕಣವೆಂದೆನಿಸುತ್ತಿತ್ತು. ಆದರೆ ಇಂದು ಮಣಿಕಾಂತರನ್ನು ನೋಡಿದಾಗಲೇ ನನಗೆ ಗೊತ್ತಾಗಿದ್ದು ಅದು ಬರಿಯ ಉತ್ತಮ ಪರಿಶ್ರಮ ಮಾತ್ರವಲ್ಲ ಅದೊಂದು ವಿಶೇಷ ಪರಿಶ್ರಮ ಎಂದು. ಏಕೆಂದರೆ ಹಾಡೆಂಬುದು ಕೇಳುವಿಕೆಗೆ ಸಂಬಂಧಿಸಿದ್ದು. ಕೇಳುವಿಕೆಯೇ ಹಾಡಿನ ಮೇಲೊಂದು ಪ್ರೀತಿ, ಅದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಉತ್ಸುಕತೆಯನ್ನು ಮೂಡಿಸಲು ಸಾದ್ಯ. ಆದರೆ ಮಣಿಕಾಂತರು ಶ್ರವಣದೋಷ ಹೊಂದಿದ ವ್ಯಕ್ತಿಯೆಂದು ನನಗೆ ಗೊತ್ತಾಗಿದ್ದೇ  ಇಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಣ್ಯರಾಡಿದ ಮಾತುಗಳಿಂದ. ಅವರದು ಬರೀ ಹಾಡು ಕೇಳಲಾಗದ ಅನಿವಾರ್ಯತೆ ಮಾತ್ರವಲ್ಲ, ಹಾಡು ಬರೆದವರು ತಮ್ಮ ಅನುಭವಗಳನ್ನು ಓತಪ್ರೋತವಾಗಿ ಹೇಳಿದರೆ ಅದನ್ನೂ  ಕೇಳಿಸಿಕೊಳ್ಳಲಾಗದ ಅಸಹಾಯಕತೆ. ಆದರೂ ಛಲಬಿಡದೇ ದೂರವಾಣಿಯಲ್ಲಿ ಮಾತನಾಡುವಾಗ ತಮ್ಮ ಧರ್ಮಪತ್ನಿ, ಮಗಳ ಸಹಾಯವನ್ನು ಪಡೆದು, ನೇರ ಸಂದರ್ಶನಕ್ಕೆ ಹೋದಾಗ ತಮ್ಮ ಸಹೋದ್ಯೋಗಿಯೊಬ್ಬರನ್ನು ಜೊತೆಗೊಯ್ದು ಅವರು ಹೇಳಿದ ವಿಷಯಗಳನ್ನೆಲ್ಲ ಕಷ್ಟಪಟ್ಟು ಮನನ ಮಾಡಿಕೊಂಡು ತಮ್ಮ ಹೃದಯಸ್ಪರ್ಷಿ  ಭಾವನೆಗಳ ಕುಂಚದಲ್ಲಿ ಬಿಡಿಸಿ 'ಹಾಡು ಹುಟ್ಟಿದ ಸಮಯ' ಎಂಬ ಅಂಕಣದಲ್ಲಿ ನಮ್ಮ ಮುಂದಿಡುತ್ತಿದ್ದರೆಂದರೆ ಅದು ವಿಶೇಷ ಪರಿಶ್ರಮವಲ್ಲದೇ ಮತ್ತಿನ್ನೇನು?  ಯಾವ ಹಾಡಿನ  ಬಗ್ಗೆ ಬರೆಯುವಾಗಲೂ ಶ್ರವಣದೋಷ ಎನ್ನುವುದು ಎಂದಿಗೂ ಅವರಿಗೆ ತಮ್ಮ ಕೆಲಸದಿಂದ ನುಣುಚಿಕೊಳ್ಳುವ ಸಾಧನವಾಗಲೇ ಇಲ್ಲ. 
          ಅವರು ಬರೆದ 'ಅಮ್ಮ ಹೇಳಿದ ಎಂಟು ಸುಳ್ಳುಗಳು', 'ಅಪ್ಪ ಅಂದ್ರೆ ಆಕಾಶ' ಪುಸ್ತಕಗಳಲ್ಲಿ ಸಮಾಜದಲ್ಲಿರುವ ತೆರೆಮರೆಯ ಅದೆಷ್ಟೋ ಸಾಧಕರನ್ನು ಕಥಾತ್ಮಕವಾಗಿ ಪರಿಚಯಿಸಿದ್ದಾರೆ. ನಮ್ಮವರ ನೋವುನಲಿವುಗಳನ್ನು ಕೇಳುವಷ್ಟೂ  ವ್ಯವಧಾನವಿಲ್ಲದ ನಮ್ಮಂತ ಅವಸರವಾದಿಗಳ ನಡುವೆ ಎ. ಆರ್. ಮಣೀಕಾಂತ್ರವರು ತಮ್ಮ ಶೃವಣದೋಷವನ್ನೂ ಮೀರಿ ಅದೆಷ್ಟೋ ಸಾಧಕರ ಸಾಧನೆಗಳಿಗೆ ಕಿವಿಯಾಗಿದ್ದಾರೆ. ಇದಲ್ಲವೇ ಸಾಧನೆಯೆಂದರೆ?

Tuesday, April 3, 2012

ಬೆತ್ತಲಾಗುವ ತವಕ

ಪ್ರತಿಯೊಬ್ಬನೂ ಜೀವನದ ಯಾವುದೋ
ಒಂದು ಕ್ಷಣದಲಿ ಬೆತ್ತಲಾಗಬಯಸುತ್ತಾನೆ.
ಸಾದ್ಯವಾಗದೇ ಸುಮ್ಮನಾಗುತ್ತಾನೆ.

ಒಂದೆಳೆಯ ಲವಲೇಶವೂ ಇಲ್ಲದಂತೆ ಬೆತ್ತಲಾಗಬೇಕು,
ಈ ಜಗದ ನೋಟವೇ ನನ್ನ ಪಾಲಿಗೆ ಕತ್ತಲಾಗಬೇಕು.
ಆದರೆ,
ಬದುಕಿನ ತುಂಬ ನೂರು ಬಣ್ಣದ,
ಸಾವಿರ ವೇಷದ ಪೋಷಾಕುಗಳು
ಯಾವೂದನ್ನೂ ಮೀರಲು ಸಾದ್ಯವಾಗದೇ
ದಿನವೂ ಹೊಸದೊಂದು ಪೋಷಾಕಿನ
ಕದಂಬ ಬಾಹುವಿನಲ್ಲಿ ಸಿಕ್ಕುತ್ತಿದ್ದೇನೆ.
ನನ್ನ ಬಣ್ಣಗಳೇ ನನಗೆ ಘಾಟೆನ್ನಿಸಿದರೂ
ಅಳಿಸಲಾಗದೇ, ಭರಿಸಲಾಗದೇ ಬಿಕ್ಕುತ್ತಿದ್ದೇನೆ.

ಬೆತ್ತಲೆನ್ನುವುದು ಎಲ್ಲರೂ ಮುಟ್ಟಲಾಗದ
ಮೇರು ಪರ್ವತದ ಎತ್ತರವದು.
ಜೀನದ ಜಂಜಾಟಗಳನ್ನೆಲ್ಲಾ ಕಳೆದುಕೊಂಡು
ಪ್ರಶಾಂತವಾಗಿ ಅಲ್ಲೊಮ್ಮೆ ನಿಂತುಬಿಡಬೇಕು,
ಪದ್ಮಾಸನ ಹಾಕಿ ಕುಂತುಬಿಡಬೇಕು.
ಆದರೆ,
ಬೆತ್ತಲಾಗುವುದು ಎಲ್ಲರಿಗೂ ಸಾದ್ಯವಿಲ್ಲ.
ಎಲ್ಲೋ ಒಬರ್ಬು ಬೆತ್ತಲಾಗುತ್ತಾರೆ,
ಬಾಹುಬಲಿಯಂತೆ, ಅಕ್ಕ ಮಹಾದೇವಿಯಂತೆ.
ಜಗವನೇ ಗಲ್ಲುವೆನೆಂದ ಅಲೆಕ್ಸಾಂಡರ್
ಬರಿಗೈಗಳ ತೋರಲಷ್ಟೇ ಸಫಲನಾದ.
ಏನೂ ಮಾಡದೇ ಥೀಯೋಡರಸ್
ಸಂಪೂರ್ಣ ಬೆತ್ತಲನಾದ.
ನಾನೂ ಅಲೆಕ್ಸಾಂಡರ್ನೇ...
ಇದ್ದುದೆಲ್ಲವ ಬಿಟ್ಟು ಇಲ್ಲದಿರುವುದ ಹುಡುಕಿ
ಏನೂ ಪಡೆಯದೇ ನಡೆದುಬಿಡುವ ಜಗದೇಕವೀರ.

Friday, March 16, 2012

ಒಬ್ಬನೇ ಸಚಿನ್...

ಅಭಿನಂದನೆಗಳು...

ಬಹಳಷ್ಟು ಸಾರಿ ಈ ಮಾತನ್ನು ಬಾಯಿಂದ ಮಾತ್ರ ಹೇಳುತ್ತೇವೆ, ಆದರೆ ಎಂದೋ ಒಮ್ಮೆ ಹೃದಯದಿಂದ ಹೇಳುತ್ತೇವೆ. ನಿನ್ನೆ ಹಾಗೆ ಎದೆಯಾಳದಿಂದ ಅಭಿನಂದನೆಗಳನ್ನು ಹೇ

ಳುವ ಸಂದರ್ಭ ಬಂದಿತು. ಸಚಿನ್ ಬಾರಿಸಿದ ನೂರನೆ ಶತಕ... ಕ್ರಿಕೇಟ್ ಇತಿಹಾಸ ಎಂದೂ ಕೇಳರಿಯದ ದಾಖಲೆಯೊಂದನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತು. ಆದರೆ ಕ್ರಿಕೇಟ್ ದೇವರ ಆ ಸಾಧನೆಗೆ ಸಾಕ್ಷಿಯಾದ ಪಂದ್ಯ ಮಾತ್ರ ಯಾಕೋ ಮೃಷ್ಟಾನ್ನ ಭೋಜನದ ಕೊನೆಯ ತುತ್ತಿನಲ್ಲಿ ನೋಣವೊಂದು ಬಿದ್ದು ಹೊಟ್ಟೆ ಸೇರಿದಂತ ಅನುಭವ ನೀಡೀತು. ಸಚಿನ್ ಸೆಂಚುರಿ ಬಾರಿಸಿದರೆ ಭಾರತ ಆ ಪಂದ್ಯವನ್ನು ಸೋಲುತ್ತದೆ ಎಂಬ ಮೂಢನಂಬಿಕೆಯನ್ನು ದೃಡಪಡಿಸುವಂತೆ ಭಾರತ ಬಾಂಗ್ಲಾದಂತಹ ಸಾಧಾರಣ ತಂಡದೆದುರು ಸೋತು ಹೋಯಿತು.

ಸಚಿನ್ ಎಂಬ ಪದವೇ ಭಾರತದ ಯುವಜನತೆಗೊಂದು ಪ್ರೇರಕ ಮಂತ್ರವಿದ್ದಂತೆ. ನಾನು ಸಚಿನ್ ಅಭಿಮಾನಿಯಾಗಲು ಕಾರಣ ಅವರ ಸಾಧನೆಗೂ ಮೀರಿದ ಅವರ ಅನುಕರಣೀಯ ಖಾಸಗಿ ಜೀವನ. ಎಂತಹ ಒತ್ತಡನ್ನೂ ಬೇಸರಿಸಿಕೊಳ್ಳದೇ ನಿಭಾಯಿಸಬಲ್ಲ ಅವರ ಸಾಮಥ್ರ್ಯ, ದುರಹಂಕಾರವಿಲ್ಲದ ಮಾತುಗಾರಿಕೆ, ಯಾವುದೇ ಅತಿರೇಕಗಳಿಲ್ಲದ ಪರಿಶುದ್ಧ ಸಂಸಾರಿಕ ಜೀವನ, ಎಂತಹ ಟೀಕೆಗಳಿಗೂ ಬರಿಯ ಬ್ಯಾಟ್ನಿಂಲೇ ಉತ್ತರಿಸುವ ಛಾತಿ... ಎಲ್ಲವೂ ನನ್ನನ್ನು ಅವರ ಅಭಿಮಾನಿಯನ್ನಾಗಿಸಿವೆ. ಸಾಧನೆಯಂಬ ಬೆಳೆಯ ಜೊತೆಗೆ ಅಹಂಕಾರ, ಲೋಲುಪತೆ, ದುಬರ್ುದಿಯಂತಹ ಕಳೆಗಳು ಸಹಜವಾಗಿ ಬೆಳೆದುಬಿಡುತ್ತವೆ. ಆದರೆ ಸಚಿನ್ ಅಂತಹ ಕಳೆಯ ಲವಲೇಶವೂ ಮೂಡದಂತೆ ಸಾಧನೆಯ ಬೆಳೆ ತಗೆದ ಬದುಕಿನ ಗದ್ದೆಯ ಪರಿಪೂರ್ಣ ಬೇಸಾಯಗಾರ.

ಸದ್ಯ ಭಾರತದ ಕ್ರಿಕೆಟ್ಟಿಗೆ ಸಚಿನ್ ಯಜಮಾನರಿದ್ದಂತೆ, ಇದ್ದ ಬದ್ದ ದಾಖಲೆಗಳ ಜವಾಬ್ದಾರಿಯನ್ನೆಲ್ಲಾ ಅವರ ಮೇಲೆ ಎತ್ತಿ ಹಾಕಿ ಇಡಿಯ ಭಾರತವೇ ಕುತೂಹಲದಿಂದ ಕಾಯುತ್ತ ಕುಳಿತುಬಿಡುತ್ತದೆ. ಏಕದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಸಿಡಿಸಬೇಕು, ಶತಕಗಳ ಶತಕವನ್ನು ಪೂರೈಸಬೇಕು, ವಿಶ್ವಕಪ್ ತರಬೇಕು... ಹೀಗೆ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಕ್ರಿಕೇಟ್ ದೇವರು ಎಲ್ಲ ಬೇಡಿಕೆಗಳನ್ನು ಪೂರೈಸುತ್ತಲೇ ಹೋಗುತ್ತದೆ. ಸಚಿನ್ ಬತ್ತದ ಚಿಲುಮೆ. ಏಕದಿನ ಪಂದ್ಯಗಳಲ್ಲಿ ಐವತ್ತು ಶತಕಗಳಾಗಬೇಕು, ಟೆಸ್ಟ್ನಲ್ಲಿ ಮುನ್ನೂರು ರನ್ಗಳನ್ನು ಭಾರಿಸಬೇಕು, ಎಂಬ ಜನರ ಕನವರಿಕೆಗಳ ಸಾಕಾರಕ್ಕಾಗಿ ಅವರು ಮತ್ತಷ್ಟು ಹುರುಪಿನಿಂದ ಇನ್ನಷ್ಟು ದಿನ ಆಡೇ ಆಡುತ್ತಾರೆ. ಅದಕ್ಕೇ ಹೇಳುವುದು, ಭಾರತಕ್ಕೆ... ಜಗತ್ತಿಗೆ... ಕ್ರಿಕೆಟ್ಟಿಗೆ... ಒಬ್ಬನೇ ಸಚಿನ್.

Saturday, February 26, 2011

ಹೀಗೊಂದು ಮೇಲ್ಪಂಕ್ತಿಯ ನಡೆ


ಶಿವರಾಜಕುಮಾರ್(ಶಿವಣ್ಣ) ಹೊಸ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟಿದ್ದಾರೆ. ಸಾಮಾನ್ಯವಾಗಿ ಚಿತ್ರರಂಗದಂತಹ ಕ್ಷೇತ್ರಗಳಲ್ಲಿ 25 ವರ್ಷಗಳು, 50 ವರ್ಷಗಳ ಸುದೀರ್ಘ ಅವಧಿಯ ಸೇವೆಯನ್ನು ಸಲ್ಲಿಸಿದಾಗ ತಾವು ಸೇವೆ ಸಲ್ಲಿಸಿದ ಕ್ಷೇತ್ರದಿಂದ ಗೌರವ, ಸನ್ಮಾನಗಳನ್ನು ಬಯಸುತ್ತಾರೆ(ತಮ್ಮದು ಸೇವೆ ಎಂದು ಪರಿಗಣಿಸುವುದರಿಂದ). ಅದು ದೊರೆಯದಿದ್ದಾಗ ಮುನಿಸಿನ, ವಿಷಾದದ ಹೇಳಿಕೆಗಳೂ ವ್ಯಕ್ತವಾಗುತ್ತವೆ. ಆದರೆ ತಾವು ಒಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಆ ಕ್ಷೇತ್ರದಿಂದ ಒಂದು ಘನತೆ, ಅರ್ಥಿಕ ಭದ್ರತೆ, ಸಾಮಾಜಿಕ ಸ್ಥಾನಮಾನಗಳನ್ನು ಪಡೆದಿರುವುದನ್ನು ಮರೆತೇ ಬಿಡುತ್ತಾರೆ. ಆದರೆ ಶಿವರಾಜಕುಮಾರ್ ತಮ್ಮ 25 ವರ್ಷಗಳ ವೃತ್ತಿ ಬದುಕಿನ ನೆನಪಿಗಾಗಿ ಒಂದು ಸಮಾರಂಭವನ್ನೇ ಏರ್ಪಡಿಸಿದ್ದಾರೆ. ಹಾಗು ತಮ್ಮನ್ನು ಬೆಳೆಸಿದ ನಿರ್ಮಾಪಕರನ್ನು , ನಿರ್ದೇಶಕರನ್ನು ಸನ್ಮಾನಿಸಲು ನಿರ್ಧರಿಸಿದ್ದಾರೆ. ಮತ್ತು ಆ ಮೂಲಕ ತಮ್ಮನ್ನು ಸಾಕಿ ಬೆಳೆಸಿದ ಚಿತ್ರರಂಗವನ್ನೇ ಸನ್ಮಾನಿಸುತ್ತಿದ್ದಾರೆ. ನಾನು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದೆನೆಂದು ಯೋಚಿಸದೇ, ಚಿತ್ರರಂಗವೇ ತನಗೆ ಈ ಪರಿ ಬೆಳೆಯಲು ಅವಕಾಶ ನೀಡಿದೆಯೆಂಬ ಅವರ ಯೋಚನೆ ನಿಜವಾಗಿಯೂ ಅಭಿನಂದಿಸಬೇಕಾದ ಮತ್ತು ಅನುಸರಿಸಬೇಕಾದ ಮೇಲ್ಪಂಕ್ತಿಯ ಬೆಳವಣಿಗೆ. ಬರಿಯ ಚಿತ್ರಗಳಲ್ಲಿ ನಟಿಸುವುದರಿಂದ ತಾರೆಗಳಾಗುವುದಿಲ್ಲ, ಇಂಥ ಕಾರ್ಯಗಳಿಂದ ಜನಮನದಲ್ಲಿ ಬೇರೂರಿದಾಗಲೇ ನಟರು ತಾರೆಗಳಾಗುವುದು.

Friday, February 25, 2011

ಕೃಷಿಗೆ ವಿದೇಶಿ ಬಂಡವಾಳ ಬೇಕೆ?

ಕೃಷಿಗೆ ವಿದೇಶಿ ಬಂಡವಾಳ ಬೇಡ... ನಮ್ಮ ದೇದಲ್ಲಿ ಬಹಳಷ್ಟು ರೈತರಿಗೆ, ಮುಖ್ಯವಾಗಿ ಸಣ್ಣ ಹಿಡುವಳಿದಾರರಿಗೆ ಕೃಷಿ ವಾಣಿಜ್ಯಕ್ಕಿಂತಲೂ ಜೀವನೋಪಾಯದ ಮಾರ್ಗವಾಗಿರುತ್ತದೆ. ಬಹಳಷ್ಟು ರೈತರು ತಮ್ಮ ಅಹಾರ ಧಾನ್ಯಗಳಿಗೆ, ತರಕಾರಿಗಳಿಗೆ ತಮ್ಮ ತುಂಡು ಭೂಮಿಯನ್ನೇ ಅವಲಂಬಿಸಿರುತ್ತಾರೆ. ಈಗಾಗಲೇ ಕೃಷಿ ಆಧುನಿಕರಣ, ವಾಣಿಜ್ಯ ಬೆಳೆಗಳು, ರಸಗೊಬ್ಬರ, ಹೈಬ್ರೀಡ್ ಬೀಜ ಎಂದೆಲ್ಲ ರೈತರ ಭೂಮಿಯ ಸಾರವನ್ನು ನಾಶ ಮಾಡಿ, ಅವರ ಆಥರ್ಿಕ ಕ್ಷಮತೆಯನ್ನೂ ಹಾಳು ಮಾಡಿ ಅವನನ್ನು ಆತ್ಮಹತ್ಯೆಯ ದವಡೆಗೆ ತಂದು ನಿಲ್ಲಿಸಿದ್ದಾಗಿದೆ ( 1990ಕ್ಕೂ ಮುಂಚೆ ರೈತರು ಎಂಥ ಬರಗಾಲಕ್ಕೂ, ಬೆಳೆ ಹಾನಿಗೂ ಅತ್ಮಹತ್ಯೆ ಪರಿಹಾರ ಎಂದು ಎಣಿಸಿರಿಲಿಲ್ಲ).
ವಿದೇಶಿಯರು ಬಂಡವಾಳ ಹೂಡಿದಾಗ ಅವರಿಗೆ ಲಾಭವನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳೂ ಗೌಣವಾಗುತ್ತವೆ. ಭೂಮಿಯ ಭವಿಷ್ಯತ್ತಿನ ಸಾರದ ಬಗ್ಗೆ ಗಮನ ಹರಿಸಲಾರರು (ಈಗಾಲೇ ನಾವು ಎಂಡೋಸಲ್ಫಾನ್ನ್ನಂತಹ ವಿಷವನ್ನು ನಿಷೇಧಸಲೂ ಮೀನಮೇಷ ಎಣಿಸುತ್ತಿದ್ದೇವೆ, ಬೂಮಿಯನ್ನೇ ಹಾಳು ಮಾಡುವ ರಸಗೊಬ್ಬರಗಳನ್ನು ಬಳಸದೇ ಇಂದಿನ ಕೃಷಿ ಉತ್ಪಾದನೆಯ ಮಟ್ಟವನ್ನು ಕಾಯ್ದುಕೊಳ್ಳುವ ಮಾರ್ಗ ತಿಳಿಯದೇ ದಿಕ್ಕು ಕಾಣದಂತಾಗಿದ್ದೇವೆ). ರೈತರು ಪ್ರತಿ ಕೃಷಿ ಅವಶ್ಯಕತೆಗೂ ವಿದೇಶಿ ಬಂಡವಾಳವನ್ನೇ ಅವಲಂಬಿಸಬೇಕಾಗಬಹುದು ( ರೈತರಾಗಲೇ ತಮ್ಮ ಸಾಂಪ್ರದಾಯಿಕ ಬೀಜಗಳನ್ನು ನಾಶ ಮಾಡಿಕೊಂಡು ಎರಡನೆ ಬಾರಿಗೆ ಫಸಲೇ ನಿಡದ ಹೈಬ್ರೀಡ್ ಬೀಜಗಳಿಗೆ ಮೊರೆ ಹೋಗಿಯಾಗಿದೆ). ರೈತರ ಮೇಲೆ ಲಾಭದಾಯಕ ಬೆಳೆಗಳನ್ನೇ ಬೆಳೆಯುವಂತೆ ಒತ್ತಡಗಳುಂಟಾಗಬಹುದು ( ಈಗಾಗಲೇ ಸಾಲ, ಹೆಚ್ಚುತ್ತಿರುವ ಕೃಷಿ ಖಚರ್ುಗಳಿಂದ ಅನಿವಾರ್ಯವಾಗಿ ರೈತ ಬೆಳೆದ ಬೆಳೆಯಲ್ಲಿ ಒಂದು ಕಾಳನ್ನೂ ತನಗೆಂದು ಇರಿಸಿಕೊಳ್ಳದೇ ಮಾರುಕಟ್ಟೆಗೆ ಸಾಗಿಸಬೇಕಾದ ಪರಿಸ್ಥಿತಿಯಲ್ಲಿದ್ದಾನೆ). ಸದ್ಯ ನಮ್ಮ ಕೃಷಿಗೆ ಈಗಿರುವ ಸ್ಥಿತಿಯಲ್ಲಿ ವಿದೇಶಿ ಬಂಡವಾಳಕ್ಕಿಂತಲೂ ಸಕರ್ಾರದ ಸಬ್ಸಿಡಿಗಳ ಅವಶ್ಯಕತೆಯಿದೆ. ಏಕೆಂದರೆ ಕೃಷಿ ವೆಚ್ಚ ಗಣನೀಯವಾಗಿ ಹೆಚ್ಚುತ್ತಿದೆ ಅದಕ್ಕೆ ತಕ್ಕಂತೆ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುತ್ತಿಲ್ಲ (ಕೃಷಿ ಉತ್ಪನ್ನಗಳು ಮೂಲಭೂತ ಅವಶ್ಯಕತೆಗಳಾದ ಧಾನ್ಯ, ಎಣ್ಣೆ ಕಾಳುಗಳು, ತರಕರಿಗಳು ಮುಂತಾದವುಗಳನ್ನು ಒಳಗೊಂಢಿರುವುದರಿಂದ ಅದು ಸುಲಭ ಸಾಧ್ಯವೂ ಅಲ್ಲ). ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಆಥರ್ಿಕ ಸ್ಥಿರತೆಯನ್ನು ನಿರ್ಧರಿಸುವ ಕೃಷಿಯಂತಹ ಉದ್ಯಮವೊಂದು ವಿದೇಶಿಯರ ಬಂಡವಾಳದ ಮೇಲೆ ಅವಲಂಬಿತವಾಗುವುದು ಭದ್ರತೆಯ ದೃಷ್ಟಿಯಿಂದಲೂ ಯೋಚಿಸಬೇಕಾದ ವಿಷಯ.

ಮಾತು-ಮೌನ

ಮೌನವೂ ಕೆಲವೊಮ್ಮೆ ಬಸವಳಿದುಬಿಡುತ್ತದೆ,
ಏನನ್ನೂ ಹೇಳುವ ಹಂಬಲವಿಲ್ಲದೇ.
ಬಂಗಾರದಂತಹ ಮೌನ ಕಾಸಿಗೂ ಕಡೆಯಾಗಿಬಿಡುತ್ತದೆ,
ಮಾತೆಂಬ ಸೇವಕನ ಬೆಂಬಲವಿಲ್ಲದೇ.

ನಾವು ನಿಂತ ನೆಲ ನಮ್ಮದಾಗಬೇಕು,
ನಮ್ಮ ಮನದ ಮಾತು ಸ್ವಂತದ್ದಾಗಬೇಕು,
ಬದುಕಿರುವವರೆಗೂ ಗೌರವದ ಬದುಕೊಂದು ನಮ್ಮ ಜೊತೆಗಿರಬೇಕೆಂದರೆ...
ಹಕ್ಕುಗಳ ಬೇಲಿಯೊಂದು ನಮ್ಮ ಸುತ್ತಲಿರಬೇಕು,
ಮತ್ತು ಮಾತುಗಳಿಂದಲೇ ಅದರ ನಿಮರ್ಾಣವಾಗಬೇಕು.

ಕೆಲವನ್ನು ಅಭಿನಂದಿಸಬೇಕು,
ಕೆಲವನ್ನು ಪ್ರತಿಬಂಧಿಸಬೇಕು,
ಕೆಲವನ್ನು ಹಲುಸಾಗಿ ಬೆಳೆಸಬೇಕು,
ಮತ್ತೆ ಕೆಲವನ್ನು ಮೊಳಕೆಯಲ್ಲೇ ಚಿಗುಟಿ ಹಾಕಬೇಕು

ಇಷ್ಟೆಲ್ಲವನ್ನೂ ಮೌನ ಎಂದಿಗೂ ಮಾಡಲಾರದು.
ಅದಕೆಂದೇ ನಾವು ಮಾತನಾಡಬೇಕು.
ನಾವು ಮಾತನಾಡಬೇಕು, ನಮಗಾಗಿ
ನಾವು ಏನೆಂದು ಅರಿತುಕೊಳ್ಳಲು ಬಯಸುತ್ತಿರುವ ಈ ಜಗಕಾಗಿ.