ಇಲ್ಲಿಯವರೆಗೂ ನಾ ನಡೆದ ಪ್ರತಿಯೊಂದು ದಾರಿಗೂ ಕವಲುಗಳಿದ್ದವು
ಇಂದೇಕೊ ಇರುವ ದಾರಿಗೂ ಮುಳ್ಳು ಜಡಿದಂತೆ ಕಾಣುತ್ತಿದೆ
ಬೆಳಗಾಯಿತು, ಎಲ್ಲರು ಎದ್ದರು, ನಾನೂ ಎಳಲೇ?
ಅವರೆಲ್ಲ ಹೊರಟಾಯ್ತು, ಅವರವರ ಕೆಲಸಕ್ಕೆ, ನಾನು?
ಪ್ರತಿ ಸೂಯರ್ೊದಯವೂ ಎದೆಯಲ್ಲಿ ನಡುಕ ಹುಟ್ಟಿಸಿತ್ತಿದೆ
ಸಕ್ಕರೆ ಟೀ ಪುಡಿಯಿದ್ದರೆ ಸಾಕೇ? ಹಾಲಿರಬೇಕು, ಗ್ಯಾಸಿರಬೇಕು
ಅಕ್ಕಿ ಬೆಂದರೆ ಸಾಕೇ? ಉಪ್ಪಾದರೂ ಬೇಡವೇ ನೆಂಜಿಕೊಳ್ಳಲು?
ನಡೆವ ದಾರಿಯ ಇಕ್ಕೆಲಗಳಲ್ಲೂ ಜನಜಾತ್ರೆ, ಎಲ್ಲರೂ ಅಪರಿಚಿತರೇ
ಪರಿಚಯ ಬೆಳೆಸಲು ಏನೋ ಮುಜುಗುರ, ಏನೆಂದುಕೊಳ್ಳುತ್ತಾರೋ!
ಪ್ರತಿ ಪ್ರಶ್ನೆಗೂ ಉತ್ತರವಿದೆಯೆಂದಾದರೆ
ನನ್ನ ಬದುಕು ಬಹುಶಃ ಪ್ರಶ್ನೆಯೇ ಆಗಿರಲಿಕ್ಕಿಲ್ಲ
ಪ್ರತಿ ಬದುಕಿಗೂ ಒಂದು ಅರ್ಥವಿದೆಯೆಂದಾದರೆ
ನನ್ನ ಬದುಕು ಬಹುಶಃ ಬದುಕೇ ಆಗಿರಲಿಕ್ಕಿಲ್ಲ!
No comments:
Post a Comment